ಮುದ್ದೇಬಿಹಾಳ: ಸರ್ಕಾರದಿಂದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ಪಾಸ್ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಸೌಲಭ್ಯ ಜಾರಿಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ)ದ ಮುದ್ದೇಬಿಹಾಳ ತಾಲೂಕು ಘಟಕದಿಂದ ಜು.26ರಂದು ಪತ್ರಿಕಾ ದಿನಾಚರಣೆ. ತಾಲೂಕು ಮಟ್ಟದ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಆಯೋಜಿಸಲು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷ ಮುತ್ತು ವಡವಡಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜಕಾರಣಿಗಳು, ಗುತ್ತಿಗೆದಾರರು, ಸಂಘ ಸಂಸ್ಥೆಗಳವರಿಂದ ಯಾವುದೇ ರೀತಿಯಲ್ಲಿ ಚಂದಾ ಎತ್ತದೆ ಸಂಘದ ಪದಾಕಾರಿಗಳು, ಸದಸ್ಯರೇ ಸ್ವ ಇಚ್ಛೆಯಿಂದ ಸಮಾರಂಭದ ಒಂದೊಂದು ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬಂದ ಕಾರಣ ಈ ಬಾರಿಯೂ ಪತ್ರಿಕಾ ದಿನಾಚರಣೆ ವಿಶೇಷವಾಗಿರಲಿದ್ದು ಇದೊಂದು ಮಾದರಿ ಆಚರಣೆಯಾಗಿಸಲು ಸರ್ವ ಸದಸ್ಯರು ಬದ್ಧರಾಗಿರುವುದಾಗಿ ಸಭೆಗೆ ತಿಳಿಸಿದರು. ಸಭೆಯಲ್ಲಿಯೇ ಸಮಾರಂಭದ ಒಂದೊಂದು ಜವಾಬ್ದಾರಿಯನ್ನು ಸದಸ್ಯರು ಸ್ವಯಂಪ್ರೇರಿತರಾಗಿ ವಹಿಸಿಕೊಂಡು ಮಾದರಿಯಾದರು.
.....
ಜು.26ರಂದು ಬೆಳಿಗ್ಗೆ 9 ಗಂಟೆಗೆ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತಗಿರಿಯಲ್ಲಿರುವ ಅರಿಹಂತ ಚಾರಿಟೇಬಲ್ ಟ್ರಸ್ಟ್ನ ಕಾಲೇಜು ಆವರಣದಲ್ಲಿ ಸಮಾರಂಭಹಮ್ಮಿಕೊಳ್ಳಲು, ಪಿಯುಸಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಮೌಲ್ಯ, ಪತ್ರಕರ್ತರ ಕರ್ತವ್ಯ ಸೇರಿ ಹಲವು ವಿಷಯಗಳನ್ನು ತಿಳಿಸಿಕೊಡಲು ವಿಶೇಷ ಉಪನ್ಯಾಸ ಏರ್ಪಡಿಸಲು, ತಾಲೂಕಿನ ಐವರು ಪತ್ರಕರ್ತರಿಗೆ ತಾಲೂಕು ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಲು ಸಭೆಯಲ್ಲಿ ಎಲ್ಲರೂ ಒಪ್ಪಿಗೆ ನೀಡಿದರು. ಇದೇ ಸಮಾರಂಭದಲ್ಲಿ ಕೆಯುಡಬ್ಲ್ಯುಜೆ ವಿಜಯಪುರ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ
ಬಸವನ ಬಾಗೇವಾಡಿಯ ಹಿರಿಯ ಪತ್ರಕರ್ತ ಪ್ರಕಾಶ ಬೆಣ್ಣೂರ ಅವರನ್ನು ಸನ್ಮಾನಿಸಲು ಮತ್ತು ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಆಹ್ವಾನಿಸಲು ಸಭೆ ಒಪ್ಪಿಗೆ ಸೂಚಿಸಿತು.
ಹಿರಿಯ ಪತ್ರಕರ್ತ, ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಬಿ.ವಡವಡಗಿ ಅವರು ಸಲಹೆ ಸೂಚನೆ ನೀಡಿ ಸಮಾರಂಭದ ರೂಪುರೇಷೆ ಕುರಿತು ಮಾತನಾಡಿ ಸರ್ವ ಸದಸ್ಯರು ಸ್ವ ಇಚ್ಚೆಯಿಂದ ಸಮಾರಂಭದ ಜವಾಬ್ದಾರಿ ವಹಿಸಿಕೊಂಡು
ಯಾರಿಂದಲೂ ಚಂದಾ ಎತ್ತದೆ ಸಮಾರಂಭವನ್ನು ಮಾದರಿಯಾಗಿಸಲು ಮುಂದೆ ಬಂದಿರುವುದು ಶ್ಲಾಘನೀಯ ಮತ್ತು ಪತ್ರಕರ್ತರಿಗೆ ಮಾದರಿಯಾದ ಕಾರ್ಯವಾಗಿದೆ ಎಂದರು.
ಸಂಘದ ತಾಲೂಕು ಉಪಾಧ್ಯಕ್ಷ ಸಿದ್ದು ಚಲವಾದಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ್, ಸಂಘದ ಮಾಜಿ ಅಧ್ಯಕ್ಷರಾದ ಎಚ್.ಆರ್ ಬಾಗವಾನ, ಅಮೀನಸಾಬ ಮುಲ್ಲಾ, ಸದಸ್ಯರಾದ ನೂರೇನಬಿ ನದಾಫ, ಬಂದೇನವಾಜ್ ಕುಮಸಿ, ಬಸವರಾಜ
ಕುಂಬಾರ, ಸಾಗರ ಉಕ್ಕಲಿ, ಪುಂಡಲೀಕ ಮುರಾಳ, ಮಕ್ಸುಲ್ ಬನ್ನೆಟ್ಟಿ, ಹಣಮಂತ ಜೀರಗೊಂಡ(ಢವಳಗಿ), ಮುತ್ತು ಬೀರಗೊಂಡ(ಢವಳಗಿ), ಗುರುರಾಜ ಪತ್ತಾರ(ಬಡಿಗೇರ), ಕೃಷ್ಣಾ ಕುಂಬಾರ, ಸೂರಜ್ ರಿಸಾಲ್ದಾರ್, ಈಶ್ವರ ಈಳಗೇರ(ರೂಢಗಿ), ನಾಗೇಂದ್ರ ಶಿವಸಿಂಪಿ ಇನ್ನಿತರರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.
ಜಿಲ್ಲಾ ಪ್ರಶಸ್ತಿಗೆ ಆಯ್ಕೆ: ಸಂಘದ
ಹಿರಿಯ ಸದಸ್ಯ ನೂರೇನಬಿ ನದಾಫೆ ಅವರನ್ನು ಚೀಟಿ ಎತ್ತುವ ಮೂಲಕ ಸಂಘದ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಜಿಲ್ಲಾ ಘಟಕವು ವಿಜಯಪುರದಲ್ಲಿ ಜು.19ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ, ಅಭಿನಂದನಾ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕೆಯುಡಬ್ಲುಜೆ ಪೂರ್ವಭಾವಿ ಸಭೆ: ಜಿಲ್ಲೆಗೆ ಒಬ್ಬರು, ತಾಲೂಕಿಗೆ ಐವರು ಪ್ರಶಸ್ತಿಗೆ ಆಯ್ಕೆ
ತಾಲೂಕು ಪ್ರಶಸ್ತಿಗೆ ಐವರ ಆಯ್ಕೆ:
ಸಭೆಯಲ್ಲಿ ಚರ್ಚೆ ನಡೆದು ತಾಲೂಕು ಮಟ್ಟದ ಉತ್ತಮ ಪತ್ರಕರ್ತ ವಾರ್ಷಿಕ ಪ್ರಶಸ್ತಿಗೆ ಯುವ ಪತ್ರಕರ್ತರಾದ ಹಣಮಂತ ಬೀರಗೊಂಡ(ಢವಳಗಿ), ರಿಯಾಜ್ ಮುಲ್ಲಾ, ಮುತ್ತು ಟಕ್ಕಳಕಿ, ಈಶ್ವರ ಈಳಗೇರ(ರೂಢಗಿ) ಮತ್ತು ಕೃಷ್ಣಾ ಕುಂಬಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜು.26ರಂದು ನಡೆಯಲಿರುವ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.