ಎಸ್ಟಿ ಮೀಸಲಾತಿಗಾಗಿ ಡಿಸೆಂಬರ್ 15ರ ಕುರುಬರ ಮಹಾ ಪ್ರತಿಭಟನೆಗೆ ವಿಜಯಪುರ ಘಟಕದಿಂದ ಬೆಂಬಲ
ವಿಜಯಪುರ:ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿಸೆಂಬರ್ 15 ರಂದು ಬೆಳಗಾವಿಯ ಸುವರ್ಣ ಸೌಧ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಲಿರುವ ಮಹಾ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕುರುಬರ ಸಂಘ–ಬೆಂಗಳೂರು ಜೊತೆಯಲ್ಲಿ ವಿಜಯಪುರ ಜಿಲ್ಲಾ ಘಟಕವೂ ಭಾಗವಹಿಸುವುದಾಗಿ ಘೋಷಿಸಿದೆ.
ಈ ಬಗ್ಗೆ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಕಂಬಾಗಿ (ರಾಜು) ಪ್ರಕಟಣೆ ಬಿಡುಗಡೆ ಮಾಡಿ, ಕುರುಬರ ಎಸ್ಟಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಸಮುದಾಯದ ಹಕ್ಕು, ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ರಾಜ್ಯದ ಎಲ್ಲ ಕುರುಬರ ಸಂಘ–ಸಂಸ್ಥೆಗಳು, ಮಹಿಳಾ ಸಂಘಟನೆಗಳು, ರಾಜಕೀಯ ಮುಖಂಡರು ಹಾಗೂ ಸಮುದಾಯದ ಮಠಾಧಿಪತಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಕರೆ ನೀಡಿದ್ದಾರೆ.
“ಕುರುಬರ ಎಸ್ಟಿ ಹಕ್ಕು ಸ್ಥಾಪನೆಗಾಗಿ ರಾಜ್ಯದಾದ್ಯಂತ ಜಾಗೃತಿ ಮೂಡುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ನಿಂತಾಗ ಮಾತ್ರ ಸರ್ಕಾರ ನಮ್ಮ ಧ್ವನಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ,” ಎಂದು ಕಂಬಾಗಿ ತಿಳಿಸಿದ್ದಾರೆ. ಪ್ರತಿಭಟನೆಯ ವ್ಯವಸ್ಥೆ, ಸಿದ್ಧತೆ ಹಾಗೂ ಸಂಚಲನ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಘಟಕಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಕುರುಬರ ಎಸ್ಟಿ ಮೀಸಲಾತಿ ಜಾರಿಗೆ ಬರಲು ಸರ್ಕಾರ ಸ್ಪಷ್ಟ ಕ್ರಮ ಕೈಗೊಂಡಾಗವರೆಗೆ ಹೋರಾಟ ಮುಂದುವರಿಯಲಿದೆ ಎಂದು ವಿಜಯಪುರ ಘಟಕ ತಿಳಿಸಿದೆ.