BELAGAVI ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸಿ ಸುವರ್ಣಸೌಧದ ಮುಂಭಾಗ ಪ್ರತಿಭಟನೆ !

Bhima Samskruthi
By -
0
 ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸಿ ಡಿಸೆಂಬರ್ 15ರಂದು ಸುವರ್ಣಸೌಧದ ಮುಂಭಾಗ ಪ್ರತಿಭಟನೆ

ಬಾಗಲಕೋಟೆ:ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಕುರಿತಾಗಿ ಸರ್ಕಾರ ನೀಡಿರುವ ಭರವಸೆ ಈವರೆಗೂ ಈಡೇರಿಲ್ಲವೆಂದು ಆರೋಪಿಸಿ, ಡಿಸೆಂಬರ್ 15ರಂದು ಬೆಳಗಾವಿಯ ಸುವರ್ಣಸೌಧದ ಮುಂಭಾಗ ಕುರುಬ ಸಮಾಜದ ವತಿಯಿಂದ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಎಸ್‌ಟಿ ಹೋರಾಟ ಸಮಿತಿಯ ಸದಸ್ಯ ಶ್ರೀ ಚಂದ್ರಶೇಖರ್ ಡಿ. ಸನ್ನಿ ತಿಳಿಸಿದ್ದಾರೆ.

ಈ ಹಿಂದೆ ಬೆಂಗಳೂರಿನ ವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮಾಜದ ಮುಖಂಡರನ್ನು ವಿಧಾನಸೌಧದ ಒಳಗೆ ಕರೆಸಿ, ಅಕ್ಟೋಬರ್ 25ರ ನಂತರ ಕುಲಶಾಸ್ತ್ರ ಅಧ್ಯಯನ ವರದಿ ಹಾಗೂ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ನಾಲ್ಕು ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಸರ್ಕಾರ ಕೇಳಿರುವ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಕುಲಶಾಸ್ತ್ರ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕುರುಬ ಸಮಾಜದ ಕುರಿತು ನಡೆದ ಎಲ್ಲಾ ಅಧ್ಯಯನ ವರದಿಗಳಲ್ಲಿಯೂ ಸಮಾಜವು ಪರಿಶಿಷ್ಟ ಪಂಗಡಕ್ಕೆ ಸೇರಲು ಅರ್ಹವಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದ್ದರೂ ಸಹ, ಸರ್ಕಾರ ಈ ವಿಷಯದಲ್ಲಿ ವಿಳಂಬ ಧೋರಣೆ ತಾಳುತ್ತಿದೆ ಎಂದು ಚಂದ್ರಶೇಖರ್ ಡಿ. ಸನ್ನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ನೀಡಿದ ಮಾತಿನಂತೆ ನಡೆದುಕೊಳ್ಳದೆ, ತಮ್ಮದೇ ಭರವಸೆಯನ್ನು ಮರೆತಂತಾಗಿದೆ ಎಂದು ಟೀಕಿಸಿದ್ದಾರೆ.

ಆದ್ದರಿಂದ ಇದೇ ಅಧಿವೇಶನದಲ್ಲೇ ಕುಲಶಾಸ್ತ್ರ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ಕುರುಬ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ. ಮುಖ್ಯಮಂತ್ರಿ ಈ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಂಡರೆ, ರಾಜ್ಯದ ಪ್ರತಿಯೊಬ್ಬ ಕುರುಬ ವ್ಯಕ್ತಿಯೂ ಅವರನ್ನು ‘ಎರಡನೇ ಅಂಬೇಡ್ಕರ್’ ರೂಪದಲ್ಲಿ ಕಾಣುವಂತೆ ಆಗಲಿದೆ ಎಂದು ಅವರು ಹೇಳಿದರು.

ಡಿಸೆಂಬರ್ 15ರಂದು ನಡೆಯುವ ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲಾ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಎಸ್‌ಟಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Tags:

Post a Comment

0Comments

Post a Comment (0)