**ಮುದ್ದೇಬಿಹಾಳ, ನ.3:“ಭಾಷೆಯು ಕೇವಲ ಸಂವಹನದ ಸಾಧನವಲ್ಲ — ಅದು ಸಂಸ್ಕೃತಿಯ ಜೀವನಾಡಿ. ಕನ್ನಡದ ಬಗ್ಗೆ ಅಭಿಮಾನವನ್ನು ಹುಟ್ಟಿಸುವಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದಾಗಿದೆ,” ಎಂದು ಪಿಎಸ್‌ಐ **ಸಂಜಯ ತಿಪ್ಪರೆಡ್ಡಿ** ಹೇಳಿದರು.
ಪಟ್ಟಣದ ಹಡಲಗೇರಿ ವ್ಯಾಪ್ತಿಯ **ಬಿಎಎಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ** 70ನೇ **ಕರ್ನಾಟಕ ರಾಜ್ಯೋತ್ಸವ**ದ ಅಂಗವಾಗಿ ನಡೆದ ವಿವಿಧ **ಸಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ** ಅವರು ಮಾತನಾಡಿದರು. “ಹಿಂದೆ ರಾಜ್ಯೋತ್ಸವವನ್ನು ರಾಜಧಾನಿ ಮಟ್ಟದಲ್ಲಿ ಮಾತ್ರ ಆಚರಿಸುತ್ತಿದ್ದೇವೆಂದು ತಿಳಿದಿದ್ದೆವು. ಆದರೆ ಈಗ ಮುದ್ದೇಬಿಹಾಳದಲ್ಲಿಯೇ ಇಂತಹ ಅದ್ಭುತ ಸಂಸ್ಕೃತಿಕ ಉತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಆಂಗ್ಲ ಮಾಧ್ಯಮವಾಗಿದ್ದರೂ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಲು ಶಾಲೆಯು ತೋರಿಸಿರುವ ಮುಂದಾಳತ್ವ ಶ್ಲಾಘನೀಯ,” ಎಂದು ಅವರು ಹೇಳಿದರು.
ವಲಯ ಅರಣ್ಯಾಧಿಕಾರಿ **ಬಸನಗೌಡ ಬಿರಾದಾರ** ಅವರು ಮಾತನಾಡಿ, “ಆಧುನಿಕ ಶಿಕ್ಷಣದ ಜೊತೆಗೆ ಕನ್ನಡ ಪ್ರೇಮವನ್ನು ಬೆಳೆಸುತ್ತಿರುವ ಬಿಎಎಸ್ ಶಾಲೆಯು ಇತರ ಆಂಗ್ಲ ಮಾಧ್ಯಮ ಸಂಸ್ಥೆಗಳಿಗೂ ಮಾದರಿಯಾಗಿದೆ. ಇಂತಹ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ,” ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ **ಸುಮಂಗಳಾ ಬಿರಾದಾರ**, ಮುಖ್ಯ ಅತಿಥಿ **ಶಿವನಗೌಡ ಬಿರಾದಾರ**, ಆಡಳಿತಾಧಿಕಾರಿ **ಪ್ರಭುಗೌಡ ಬಿರಾದಾರ** ಮಾತನಾಡಿದರು.
ಶಾಲೆಯ ಪ್ರಾಂಶುಪಾಲೆ **ಕು. ರಿಷಿಕಾ ನಾಯಕ** ಅವರು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ತಂಡಭಾವ ಬೆಳೆಸುವ ಉದ್ದೇಶದಿಂದ ನೀಲಿ, ಕೆಂಪು, ಹಲದಿ ಮತ್ತು ಹಸಿರು ಬಣ್ಣಗಳ ನಾಲ್ಕು ತಂಡಗಳನ್ನು ರಚಿಸಿ ಪ್ರತೀ ತಂಡಕ್ಕೆ ವಿಭಿನ್ನ ಜವಾಬ್ದಾರಿಗಳನ್ನು ಹಂಚಿಕೊಟ್ಟರು.
ಶಿಕ್ಷಕ ವಿನಯ ಪಾಟೀಲ  ಸ್ವಾಗತಿಸಿದರು, ಕು. ಭಾಗ್ಯಶ್ರೀ ಮತ್ತು ಕು. ರೇಷ್ಮಾ ನಿರೂಪಣೆ ನಡೆಸಿದರು, ಸಿತಾರಾಮ ಲಮಾಣಿ ವಂದನೆ ಸಲ್ಲಿಸಿದರು.
ಮುದ್ದೇಬಿಹಾಳ ಬಿಎಎಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ 70ನೇ ರಾಜ್ಯೋತ್ಸವ ಸಂಭ್ರಮವನ್ನು ಪಿಎಸ್‌ಐ ಸಂಜಯ ತಿಪ್ಪರೆಡ್ಡಿ ಉದ್ಘಾಟಿಸಿದರು.
---