ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು (Majestic Bus Stand) ಹೈಟೆಕ್ ಮಾಡಲು ಸರ್ಕಾರ ಹೊರಟಿದ್ದು, ಮುಂದೆ ಮೆಜೆಸ್ಟಿಕ್ ಬಸ್ ಸ್ಟಾಪ್ ಇಂಟರ್‌ಮಾಡೆಲ್ ಟ್ರಾನ್ಸ್‌ಪೋರ್ಟ್ ಹಬ್ ಆಗಲಿದೆ.
ಬೆಂಗಳೂರಿನ (Bengaluru) ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಲಕ್ಷಾಂತರ ಜನ ಬರ್ತಾರೆ, ಹೋಗ್ತಾರೆ. ಸುಮಾರು ಮೂವತ್ತು ವರ್ಷಗಳ ಇತಿಹಾಸವಿರುವ ಈ ಬಸ್ ನಿಲ್ದಾಣವನ್ನು ನವೀಕರಣ ಮಾಡಲು ಸರ್ಕಾರ ಮುಂದಾಗಿದೆ.
ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಮೆಜೆಸ್ಟಿಕ್ ಬಸ್ ನಿಲ್ದಾಣದ ಜಾಗವನ್ನು ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಯ ಅಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಪುನರ್ ಅಭಿವೃದ್ಧಿಪಡಿಸಿ, ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಿಸುತ್ತೇವೆ ಎಂದು ಘೋಷಿಸಿದ್ದರು. ಈ ಹಿನ್ನೆಲೆ ಸಾರಿಗೆ ಇಲಾಖೆ ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಇಂಟರ್‌ಮಾಡಲ್ ಟ್ರಾನ್ಸ್‌ಪೋರ್ಟ್ ಹಬ್ ಆಗಿ ಪರಿವರ್ತನೆ ಮಾಡಲು ಸಜ್ಜಾಗುತ್ತಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಹಮ್ಮಿಕೊಳ್ಳಲು ಪ್ಲಾನ್ ಮಾಡಿದೆ. ಈ ಪ್ರಾಜೆಕ್ಟ್ ಬಗ್ಗೆ ತಂತ್ರಜ್ಞ ಸಲಹೆಗಾರರನ್ನು ನೇಮಿಸಲು ಕೆಎಸ್‌ಆರ್‌ಟಿಸಿ ಟೆಂಡರ್ ಕರೆದಿದೆ.
ಈ ಯೋಜನೆಯ ಉದ್ದೇಶವೆಂದರೆ, ನಗರ ಮತ್ತು ಅಂತರನಗರ ಸಾರಿಗೆ, ಮೆಟ್ರೋ ಮತ್ತು ರೈಲ್ವೆ ಸೇವೆಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸಿ ಪ್ರಯಾಣಿಕರಿಗೆ ಸುಗಮ ಸಂಚಾರ ಅನುಭವ ಒದಗಿಸುವುದು. ಸುಮಾರು 40 ಎಕರೆ ಭೂಭಾಗದಲ್ಲಿ ಈ ಹಬ್ ನಿರ್ಮಾಣವಾಗಲಿದೆ. ಇದು ಈಗಿರುವ ಕೆಎಸ್‌ಆರ್‌ಟಿಸಿ ಟರ್ಮಿನಲ್‌ಗಳು 1, 2, 3 ಅನ್ನು ಒಳಗೊಂಡಿರುತ್ತದೆ. ಶಾಪಿಂಗ್ ಕಾಂಪ್ಲೆಕ್ಸ್, ಆಹಾರ ಮಳಿಗೆಗಳು, ಕಚೇರಿ ಪ್ರದೇಶಗಳು ಸೇರಿ ವಾಣಿಜ್ಯ ವ್ಯವಸ್ಥೆಗೂ ಅವಕಾಶವಿರುತ್ತದೆ. ಈಗ ಕೆಎಸ್‌ಆರ್‌ಟಿಸಿ ಟೆಂಡರ್‌ನಲ್ಲಿ ಆಯ್ಕೆಯಾದ ಸಲಹೆಗಾರರು ಸ್ಥಳ ಪರಿಶೀಲನೆ, ಸಂಚಾರದ ಚಟುವಟಿಕೆ ವಿಶ್ಲೇಷಣೆ, ಮಾರುಕಟ್ಟೆ ಅಗತ್ಯತೆಯ ಮುನ್ಸೂಚನೆ, ಪರಿಸರ ಹಾಗೂ ಸಾಮಾಜಿಕ ಪರಿಣಾಮಗಳ ಅಧ್ಯಯನದೊಂದಿಗೆ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಬೇಕು.