BJP ಬಿಜೆಪಿಗೆ ಮುಳುವಾದ ಆಂತರಿಕ ಭಿನ್ನಮತ, ಮುಂದೇನು ಎಂಬುದೇ ಗೊಂದಲ

Bhima Samskruthi
By -
0

 






ಬಿಜೆಪಿ ಬಣ ಕಿತ್ತಾಟ ತೀವ್ರ ಸ್ವರೂಪ ಪಡೆದುಕೊಂಡ ಪರಿಣಾಮ ಪಕ್ಷದ ಕಾರ್ಯಕರ್ತರ ಮೇಲಾಗಿದೆ. ನಾಯಕರ ನಡುವಿನ ಸಂಘರ್ಷ ಕಾರ್ಯಕರ್ತರ ಹುಮ್ಮಸ್ಸು ಕುಗ್ಗಿಸಿದೆ. ಹೀಗಾಗಿ ಸರ್ಕಾರದ ವಿರುದ್ಧ ಯಾವುದೇ ಹೋರಾಟಗಳು ದೊಡ್ಡ ಮಟ್ಟದಲ್ಲಿ ಯಶಸ್ವಿ ಕಾಣುತ್ತಿಲ್ಲ. ಮತ್ತೊಂದು ಕಡೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯೂ ರಾಜ್ಯದಲ್ಲಿ ನಿರೀಕ್ಷಿತ ಫಲ ನೀಡುತ್ತಿಲ್ಲ. ಇದು ಹೀಗೆ ಮುಂದುವರಿದರೆ ಯಾವ ಹಂತಕ್ಕೆ ತಲುಪಲಿದೆ ಎಂಬ ಕುತೂಹಲ ಸಹಜವಾಗಿ ಕೆರಳಿಸುತ್ತದೆ.


2023 ರ ಚುನಾವಣೆಯಲ್ಲಿ ಹೀನಾಯವಾಗಿ ಕಂಡ ಸೋಲು ಬಿಜೆಪಿಗೆ ಮೊದಲ ಹೊಡೆತವಾಗಿತ್ತು. 66 ಸ್ಥಾನಗಳನ್ನು ಗಳಿಸಿಕೊಂಡ ಬಿಜೆಪಿ ನಂತರದಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಆಡಳಿತ ಪಕ್ಷದ ವಿರುದ್ಧ ಹೋರಾಟ ರೂಪಿಸಲು ಮುಂದಾಯ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಹೋದರೂ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ.

ಮುಡಾ ಹಗರಣದ ಮೂಲಕ ಗಮನ ಸೆಳೆಯುವ ಪ್ರಯತ್ನ

ಆರಂಭದಲ್ಲಿ ಬಿಜೆಪಿಗೆ ರಾಜ್ಯಾಧ್ಯಕ್ಷ ಸ್ಥಾನದ ಕೊರತೆ ಇತ್ತು. ಬಳಿಕ ಬಿ ವೈ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿದ ಹೈಕಮಾಂಡ್ ಈ ಸಮಸ್ಯೆಯನ್ನು ಸರಿಪಡಿಸಿತು. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ವಿಜಯೇಂದ್ರ ಕೆಲವೊಂದು ಭಿನ್ನಾಭಿಪ್ರಾಯಗಳು, ವಿರೋಧಗಳ ನಡುವೆಯೂ ಮುಡಾ ಹಗರಣದಲ್ಲಿ ಬೆಂಗಳೂರು - ಮೈಸೂರು ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದರು. ಬಹುಷಃ ಬಿಜೆಪಿ ರಾಜ್ಯದಲ್ಲಿ ನಡೆಸಿದ ಗಮನ ಸೆಳೆಯುವ ಹೋರಾಟ ಇದೊಂದೇ ಆಗಿತ್ತು.
ಅದಕ್ಕೂ ಮೊದಲು ವಾಲ್ಮೀಕಿ ನಿಗಮ ಹಗರಣದಲ್ಲಿ ತಕ್ಕ ಮಟ್ಟಿನ ಹೋರಾಟ ನಡೆಸಿತ್ತು. ಆದರೆ ಬಳಿಕ ನಡೆದ ವಕ್ಫ್ ವಿರೋಧಿ ಹೋರಾಟದಲ್ಲಿ ಬಿಜೆಪಿ ಆಂತರಿಕ ತಿಕ್ಕಾಟವೇ ಚರ್ಚೆಯ ವಿಚಾರವಾಗಿತ್ತು. ಈ ಹಿನ್ನೆಲೆಯಲ್ಲಿ ವಕ್ಫ್ ಹೋರಾಟ ರಾಜ್ಯದ ಗಮನ ಸೆಳೆದಿಲ್ಲ. ಸದನದಲ್ಲೂ ಬಿಜೆಪಿ ವಕ್ಫ್ ವಿಚಾರವಾಗಿ ಗಮನ ಸೆಳೆಯುವ ಹೋರಾಟವನ್ನು ನಡೆಸುವಲ್ಲಿ ವಿಫಲವಾಯ್ತು. ಬಿಜೆಪಿ ಎರಡು ಬಣಗಳು ಪ್ರತ್ಯೇಕವಾಗಿ ಈ ಹೋರಾಟವನ್ನು ನಡೆಸಿದ್ದವು. ಇದು ಗೊಂದಲದಲ್ಲೇ ಅಂತ್ಯಗೊಂಡಿತು.

ಪ ಚುನಾವಣೆಯಲ್ಲಿ ವಿಫಲ

ಈ ನಡುವೆ ಬಿಜೆಪಿಗೆ ಸವಾಲಾಗಿದ್ದು 3 ಕ್ಷೇತ್ರಗಳ ಉಪ ಚುನಾವಣೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಉಪ ಚುನಾವಣೆಯಲ್ಲೂ ಪ್ರಭಾವ ಬೀರಿಲ್ಲ. ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿತ್ತು. ರಾಜ್ಯ ಸರ್ಕಾರದ ವೈಫಲ್ಯಗಳು ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ನಿರೀಕ್ಷೆಯೂ ಹುಸಿಯಾಯ್ತು. ಬಿಜೆಪಿ ಮತ್ತು ಜೆಡಿಎಸ್ ತಂತ್ರಗಾರಿಕೆ ವಿಫಲವಾಯ್ತು.


ಭಿನ್ನರ ಬಂಡಾಯ

ಈ ನಡುವೆ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಾದ ಕಮಲ ಪಡೆಗಳು ಆಂತರಿಕ ಕಚ್ಚಾಟದ ವಿರುದ್ಧವೇ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್ ನೇತೃತ್ವದ ಭಿನ್ನರ ಬಣ ಗಂಭೀರ ಸ್ವರೂಪದ ಆರೋಪಗಳನ್ನು ಮಾಡುತ್ತಾ ಬಂದಿದೆ. ಇದಕ್ಕೆ ಕೌಂಟರ್ ಎಂಬಂತೆ ಯತ್ನಾಳ್ ವಿರುದ್ಧ ವಿಜಯೇಂದ್ರ ಬಣವೂ ಆರೋಪಗಳ ಸುರಿಮಳೆ ಮಾಡುತ್ತಿದೆ.
ಎರಡು ಬಣಗಳ ಕಿತ್ತಾಟ ಸದ್ಯ ಬೀದಿಗೆ ಬಂದಿದೆ. ಇದನ್ನು ಶಮನ ಮಾಡಲು ಬಿಜೆಪಿ ವರಿಷ್ಠರು ಮತ್ತು ಸಂಘದ ಪ್ರಮುಖರು ನಡೆಸಿದ ಪ್ರಯತ್ನವೂ ವಿಫಲವಾಗಿದೆ. ಸದ್ಯ ಇದಕ್ಕೆ ವೇಗದಲ್ಲಿ ಪೂರ್ಣ ವಿರಾಮ ಬೀಳುವ ಸಾಧ್ಯತೆಗಳು ತೀರಾ ಕಡಿಮೆ ಇದೆ. ಇನ್ನೇನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಪ್ರಕ್ರಿಯೆಗಳು ಶುರುವಾಗಿವೆ. ವಿಜಯೇಂದ್ರ ಅವರನ್ನು ಬದಲಾವಣೆ ಮಾಡಲೇ ಬೇಕು ಎಂದು ಯತ್ನಾಳ್ ಬಣ ಪಟ್ಟು ಹಿಡಿದಿದೆ. ಆದರೆ ವಿಜಯೇಂದ್ರ ಮುಂದುವರಿಯಬೇಕು ಎಂದು ಮತ್ತೊಂದು ಬಣ ಹಠಕ್ಕೆ ಬಿದ್ದಿದೆ.

MOURYA YALLAPPA PUJARI

Tags:

Post a Comment

0Comments

Post a Comment (0)