BIG NEWS ಬಿಗ್ ಬಾಸ್‌ಗೆ ಶಾಕ್ ನೀಡಿದ ಬೆಂಗಳೂರು ಜಿಪಂ ಸಿಇಒ; ಶೋ ನಿಲ್ಲಿಸಲು ಆದೇಶ; ಗ್ರಾಂಡ್ ಫಿನಾಲೆ ನಡೆಯೋದು ಡೌಟ್!
By -Bhima Samskruthi
January 13, 2025
0
ಬಿಗ್ ಬಾಸ್‌ಗೆ ಶಾಕ್ ನೀಡಿದ ಬೆಂಗಳೂರು ಜಿಪಂ ಸಿಇಒ; ಶೋ ನಿಲ್ಲಿಸಲು ಆದೇಶ; ಗ್ರಾಂಡ್ ಫಿನಾಲೆ ನಡೆಯೋದು ಡೌಟ್!
ಬೆಂಗಳೂರು : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ಗೆ ಸಂಕಷ್ಟ ಎದುರಾಗಿದೆ. ನಟ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನೂ ಕೇವಲ ಮೂರು ವಾರ ಮಾತ್ರ ಬಾಕಿಯಿದೆ. ಈ ವೇಳೆ ಬಿಗ್‌ಬಾಸ್ ತಂಡಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಶಾಕ್ ನೀಡಿದೆ. ಮಾಳಗೊಂಡನಹಳ್ಳಿಯಲ್ಲಿ ಕಾನೂನು ಬಾಹಿರವಾಗಿ ನಡೆಸಲಾಗುತ್ತಿರುವ ಬಿಗ್ ಬಾಸ್ ಶೋ ಅನ್ನು ಸ್ಥಗಿತಗೊಳಿಸುವಂತೆ ಬೆಂಗಳೂರು ಸಿಟಿ ಜಿಲ್ಲಾ ಪಂಚಾಯಿತಿ ಸಿಇಒ ಲತಾಕುಮಾರಿ ಸೂಚನೆ ನೀಡಿದ್ದಾರೆ. ಇದರಿಂದ ಬಿಗ್ ಬಾಸ್ ಶೋ ಮುಂದುವರಿಯುತ್ತಾ ಎಂಬ ಅನುಮಾನಗಳು ದಟ್ಟವಾಗಿವೆ.
ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ನಡೆಯುತ್ತಿದ್ದು, ಬಹುತೇಕ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈ ವೇಳೆ ಬಿಗ್ ಬಾಸ್‌ಗೆ ಸಂಕಷ್ಟ ಎದುರಾಗಿದ್ದು, ಶೋ ಅನ್ನೇ ನಿಲ್ಲಿಸುವಂತೆ ಅಧಿಕಾರಿಗಳು ಕಟ್ಟಪ್ಪಣೆ ಮಾಡಿದ್ದಾರೆ. ಬಿಗ್‌ಬಾಸ್ ಶೋ ನಡೆಯುತ್ತಿರುವ ಮಾಳಿಗೊಂಡನಹಳ್ಳಿ ಸರ್ವೆ ನಂ.128/1ರ ವಾಣಿಜ್ಯ, ವ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದ್ದು, ಶೋ ಅನ್ನು ನಿಲ್ಲಿಸಿ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಜಿಪಂ ಸಿಇಒ ಲತಾ ಕುಮಾರಿ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ ಬಿಗ್‌ಬಾಸ್ ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದೆ ನಡೆಸಲಾಗುತ್ತಿದೆ ಎಂದು ರಾಘವೇಂದ್ರ ಆಚಾರ್ ಎಂಬುವವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಕಾನೂನು ಬಾಹಿರವಾಗಿ ಬಿಗ್‌ಬಾಸ್ ಆಯೋಜನೆ? ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಭೂಪರಿವರ್ತನೆ ಆದೇಶ ರದ್ದು ಮಾಡಿದ್ದಾರೆ. ಇನ್ನು, ರಾಮೋಹಳ್ಳಿ ಗ್ರಾಮ ಪಂಚಾಯಿತಿಯವರು ಬಿಗ್‌ಬಾಸ್ ಶೋ ನಡೆಸಲು ಅನುಮತಿ ನೀಡಿಲ್ಲ ಎಂಬುದಾಗಿ ತಿಳಿಸಿರುವ ಕಾರಣ ಕೂಡಲೇ ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮಕ್ಕೆ ಸಿಇಒ ಲತಾ ಕುಮಾರಿ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಅವರ ಸೂಚನೆಯಂತೆ ರಾಮೋಹಳ್ಳಿ ಪಿಡಿಒ, ಜಮೀನಿನ ಮಾಲೀಕ ಪಡೆದಿದ್ದ ವಾಣಿಜ್ಯ, ವ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್‌ನ್ನು ರದ್ದು ಮಾಡಿದ್ದು ಬಿಗ್‌ಬಾಸ್ ಶೋ ನಿಲ್ಲಿಸುವಂತೆ ಆದೇಶಿಸಿದ್ದಾರೆ. ಇದರೊಂದಿಗೆ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಶೋ ಮುಕ್ತಾಯ ಆಗುವ ಮುಂಚೆಯೇ ನಿಲ್ಲುತ್ತಾ ಎಂಬ ಪ್ರಶ್ನೆಗಳು ಸೃಷ್ಟಿಯಾಗಿವೆ.
ಪ್ರೆಸ್ ಕ್ಲಬ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ರಾಘವೇಂದ್ರ ಆಚಾರ್ ಹಾಗೂ ನೆಲಮಂಗಲದ ಭಾನುಪ್ರಕಾಶ್ ಈ ಬಗ್ಗೆ ದೂರು ನೀಡಿದ್ದರು. ರಾಜ್ಯದ ದೊಡ್ಡ ರಿಯಾಲಿಟಿ ಶೋ ಅನ್ನು ಅನುಮತಿ ಇಲ್ಲದೆ ನಡೆಸುವುದು ತಪ್ಪು. ಎಲ್ಲರಿಗೂ ಒಂದೇ ಕಾನೂನು. ಈಗಾಗಲೇ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದು, ಬಿಗ್‌ಬಾಸ್ ನಡೆಯುತ್ತಿರುವ ಜಾಗದ ಲೈಸೆನ್ಸ್, ಭೂಪರಿವರ್ತನೆ ಆದೇಶವನ್ನು ಸಹ ರದ್ದು ಮಾಡಲಾಗಿದೆ. ಬಿಗ್ ಬಾಸ್ ಶೋ ನಿಲ್ಲಿಸಲು ಸೂಚನೆ ಇದೆ. ನಿಲ್ಲಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಬಿಗ್ ಬಾಸ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಒಟ್ಟಿನಲ್ಲಿ, ಈ ಬಾರಿ ಸ್ವರ್ಗ, ನರಕ ಕಾನ್ಸೆಪ್ಟ್‌ನಿಂದ ಶುರುವಾದ ಬಿಗ್‌ಬಾಸ್ ಕನ್ನಡ ವಿವಾದಗಳು ಮುಂದುವರೆದಿದ್ದು, ಈಗ ಶೋ ನಿಲ್ಲಿಸುವ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ಬಿಗ್ ಬಾಸ್ ಕನ್ನಡ ಟೀಂ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ಕಾನೂನು ಹೋರಾಟಕ್ಕೆ ಮುಂದಾಗುತ್ತಾ? ಅಥವಾ ಶೋ ನಿಲ್ಲಿಸುತ್ತಾ ಎನ್ನುವುದು ಕುತೂಹಲ ಕೆರಳಿಸಿದೆ.